ಪ್ರಜಾನಿರ್ಧಾರ -
	ಕಾನೂನಾಗಿ ಮಾಡಬೇಕಾಗಿರುವ ವಿಷಯವೊಂದನ್ನು ಕುರಿತಂತೆ ಮತದಾರರು ತಮ್ಮ ಮತವನ್ನು ಅಭಿವ್ಯಕ್ತಿಸುವ ವಿಧಾನಗಳಲ್ಲೊಂದು (ರೆಫರೆಂಡಮ್). ಇನ್ನೊಂದು ವಿಧಾನ ಪ್ರಜಾನಿರ್ದೇಶನ (ಇನಿಷಿಯೇಟಿವ್) (ನೋಡಿ- ಪ್ರಜಾನಿರ್ದೇಶನ). ಸ್ವಿಟ್‍ಜûರ್ಲೆಂಡಿನಲ್ಲಿ ಸಂವಿಧಾನದ ತಿದ್ದುಪಡಿಗೆ ಸಾಮಾನ್ಯವಾಗಿ ಈ ವಿಧಾನವನ್ನು ಉಪಯೋಗಿಸುವರು. ಸಂವಿಧಾನ ತಿದ್ದುಪಡಿ ವಿಧೇಯಕವಾಗಲಿ, ಒಂದು ಹೊಸ ವಿಧೇಯಕವೇ ಆಗಲಿ, ವಿಧಾನ ಮಂಡಲದಿಂದ ಅಂಗೀಕೃತವಾದಾಗ ಅದನ್ನು ಪ್ರಜಾನಿರ್ಧಾರಕ್ಕೆ ಒಪ್ಪಿಸುವರು. ಆ ವಿಧೇಯಕದ ಅಗತ್ಯ ಬಹುಮತದಿಂದ ಸ್ಥಾಪಿತವಾದರೆ ಅದು ಕಾನೂನಾಗುತ್ತದೆ. ಅದನ್ನು ಜನರು ತಿರಸ್ಕರಿಸಿದರೆ ಆ ವಿಧೇಯಕ ಬಿದ್ದು ಹೋಗುವುದು. ಈ ವಿಧಾನವನ್ನು ಆಸ್ಟ್ರೇಲಿಯಾದಲ್ಲಿ ಸಂವಿಧಾನದ ತಿದ್ದುಪಡಿಗಾಗಿ ಬಳಸಿಕೊಳ್ಳುತ್ತಾರೆ. ಫ್ರಾನ್ಸಿನ ಅಧ್ಯಕ್ಷ ಜಾಲ್ರ್ಸ್ ಡ ಗಾಲ್ ಐದನೆಯ ಗಣರಾಜ್ಯದಲ್ಲಿ ಅನೇಕ ಸಲ ಈ ವಿಧಾನವನ್ನು ಅನುಸರಿಸಿದರು. ಪಾನನಿರೋಧದ ಮೇಲೆ ಜನಾಭಿಪ್ರಾಯ ಪಡೆಯಲು ಈ ವಿಧಾನವನ್ನು ನ್ಯೂಜಿûಲೆಂಡಿನಲ್ಲಿ 1911, 1914, 1919, 1922, 1925, ಮತ್ತು 1928 ರಲ್ಲಿ ಬಳಸಲಾಯಿತು. ಪ್ರತಿಯೊಂದು ಸಂದರ್ಭದಲ್ಲೂ ಪಾನನಿರೋಧವನ್ನು ತಿರಸ್ಕರಿಸಲಾಯಿತು. ಈ ವಿಧಾನವನ್ನು ಅಮೆರಿಕ ಸಂಯುಕ್ತ ಸಂಸ್ಥಾನಗಳ ಅನೇಕ ರಾಜ್ಯಗಳೂ ಬಳಸುತ್ತಿವೆ. ಸ್ತ್ರೀಯರ ಮತಾಧಿಕಾರವನ್ನು 1910ರಲ್ಲಿ ವಾಷಿಂಗ್‍ಟನ್ನಿನಲ್ಲೂ 1911ರಲ್ಲಿ ಕ್ಯಾಲಿಫೋರ್ನಿಯಾದಲ್ಲೂ ಪ್ರಜಾನಿರ್ಧಾರದ ಮೂಲಕ ತೀರ್ಮಾನಿಸಲಾಯಿತು. ಇದೂ ಅಲ್ಲದೆ ಹಣಕಾಸಿನ ಉಪನಿಯಮಗಳ ಮೇಲೆ ತೆರಿಗೆದಾರರ ಅಭಿಪ್ರಾಯ ಪಡೆಯಲು ಅಲ್ಲಿ ಅನೇಕ ಸ್ಥಳೀಯ ಸರ್ಕಾರಗಳು ಈ ವಿಧಾನವನ್ನು ಬಳಸುತ್ತಿವೆ.

	ಪ್ರಜಾನಿರ್ಧಾರ ಐಚ್ಚಿಕವಾದುದ್ದಾಗಿರಬಹುದು ಅಥವಾ ಕಡ್ಡಾಯದ್ದಾಗಿರಬಹುದು. ವಿಧಾನಮಂಡಲದಿಂದ ಅಂಗೀಕೃತವಾದ ಒಂದು ವಿಧೇಯಕವನ್ನು ಒಂದು ನಿರ್ದಿಷ್ಟ ಸಂಖ್ಯೆಯ ಪ್ರಜೆಗಳ ಕೋರಿಕೆಯ ಮೇರೆಗೆ ಪ್ರಜೆಗಳ ಅಭಿಪ್ರಾಯಕ್ಕೆ ಒಪ್ಪಿಸುವುದೇ ಐಚ್ಚಿಕ ಪ್ರಜಾ ನಿರ್ಧಾರ. ಇದನ್ನು ಪ್ರಜೆಗಳು ಬಹುಮತದಿಂದ ಅಂಗೀಕರಿಸಿದರೆ ಆಗ ಇದು ಅಧಿನಿಯಮವಾಗಿ ಉಳಿಯುವುದು. ಇದನ್ನು ಪ್ರಜೆಗಳು ತಿರಸ್ಕರಿಸಿದರೆ ವಿಧಾನಮಂಡಲದ ತೀರ್ಮಾನವನ್ನು ತಳ್ಳಿಹಾಕಿದಂತಾಗುತ್ತದೆ. ಸ್ವಿಟ್‍ಜûರ್‍ಲ್ಯಾಂಡಿನಲ್ಲಿ, ವಿಧಾನಾಂಗ ಜರೂರೆಂದೂ ಸ್ಪಷ್ಟಪಡಿಸದಿದ್ದ ಪಕ್ಷದಲ್ಲಿ, ಸಾಧಾರಣವಾದ ವಿಧೇಯಕಗಳಿಗೆ ಐಚ್ಚಿಕ ಪ್ರಜಾನಿರ್ಧಾರದ ಅವಕಾಶ ಉಂಟು. ಇದಕ್ಕೆ ಮೂವತ್ತು ಸಾವಿರ ಪ್ರಜೆಗಳಿಂದಾಗಲಿ, ಎಂಟು ಜಿಲ್ಲೆಗಳ (ಕ್ಯಾಂಟನ್) ವಿಧಾನಮಂಡಲಗಳಿಂದಾಗಲಿ ಕೋರಿಕೆ ಬರಬೇಕು.

	ಕೆಲವು ಗೊತ್ತಾದ ವಿಧೇಯಕಗಳನ್ನು ಪ್ರಜೆಗಳ ಅಂತಿಮ ತೀರ್ಮಾನಕ್ಕಾಗಿ ಅವರ ಮುಂದಿಟ್ಟು ಅವರ ಅಭಿಮತಗಳನ್ನು ತೆಗೆದುಕೊಳ್ಳಬೇಕೆಂದು ವಿಧಿಸಲಾಗಿರಬಹುದು. ಆಗ ಅಂಥ ಕ್ರಮ ಕಡ್ಡಾಯದ ಪ್ರಜಾನಿರ್ಧಾರವೆನಿಸುತ್ತದೆ. ಸ್ವಿಟ್‍ಜûರ್‍ಲೆಂಡ್ ಮತ್ತು ಆಸ್ಟ್ರೇಲಿಯ ದೇಶಗಳಲ್ಲಿ ಸಂವಿಧಾನದ ತಿದ್ದುಪಡಿ ವಿಧೇಯಕಗಳನ್ನು ಈ ಬಗೆಯ ಪ್ರಜಾನಿರ್ಧಾರಕ್ಕೆ ಒಪ್ಪಿಸಬೇಕು. ಸ್ವಿಟ್‍ಜûರ್‍ಲೆಂಡಿನ ಕೆಲವು ಜಿಲ್ಲೆಗಳಲ್ಲಿ ಸಾಧಾರಣವಾದ ವಿಧೇಯಕಗಳನ್ನೂ ಕಡ್ಡಾಯವಾಗಿ ಪ್ರಜಾಭಿಪ್ರಾಯಕ್ಕೆ ಒಪ್ಪಿಸುತ್ತಾರೆ.

	ಪ್ರಜಾನಿರ್ಧಾರ ಪ್ರತ್ಯಕ್ಷ ಅಧಿನಿಯಮ ರಚನೆಯ ಒಂದು ವಿಧಾನ. ಪ್ರಜಾಪ್ರಭುತ್ವ ಇದರಲ್ಲಿ ಅಡಕವಾಗಿದೆ. ಪ್ರತಿಯೊಬ್ಬ ಪ್ರಜೆಯೂ ತನ್ನ ಹಿತವನ್ನು ತಾನು ಚುನಾಯಿಸಿರುವ ಪ್ರತಿನಿಧಿಗಿಂತ ಚೆನ್ನಾಗಿ ಬಲ್ಲನೆಂಬುವುದನ್ನು ಪ್ರಜಾ ನಿರ್ಧಾರ ತತ್ವ ಮಾನ್ಯ ಮಾಡುತ್ತದೆ. ಈ ವ್ಯವಸ್ಥೆ ರಾಜಕೀಯ ಪಕ್ಷಗಳ ಪ್ರಾಮುಖ್ಯವನ್ನು ಕಡಿಮೆ ಮಾಡುವುದಲ್ಲದೆ ವಿಧಾನಮಂಡಲದ ಅತಿಗಳನ್ನು ಹತೋಟಿಯಲ್ಲಿಡುತ್ತದೆ. ವಿಧಾನಮಂಡಲದಲ್ಲಿರುವ ಬಹುಮತ ಪಡೆದ ರಾಜಕೀಯ ಪಕ್ಷದ ಸ್ವೇಚ್ಛಾವೃತ್ತಿಗೆ ಇದು ಅಂಕುಶವಾಗಿ ಕೆಲಸ ಮಾಡುತ್ತದೆ. 

	ಆದರೆ, ಪ್ರಜಾನಿರ್ಧಾರ ಪದ್ಧತಿಯನ್ನು ಅನೇಕರು ಟೀಕಿಸಿದ್ದಾರೆ. ಇದರಿಂದ ವಿಧಾನಮಂಡಲದ ಘನತೆ ಶಿಥಿಲಗೊಳ್ಳುವುದಲ್ಲದೆ, ಅದರ ಸದಸ್ಯತ್ವದ ಮೇಲೂ ಪರಿಣಾಮ ಉಂಟಾಗುತ್ತದೆ. ತಾವು ತರುವ ಕ್ರಮಗಳು ಅಂತಿಮವಾಗಿ ಪ್ರಜಾನಿರ್ಧಾರದಿಂದ ಮಾರ್ಪಾಡಾಗಬಹುದೆಂದು ಚುನಾಯಿತ ಪ್ರತಿನಿಧಿಗಳು ಭಾವಿಸಿದಾಗ ಅವರು ಅಧಿನಿಯಮ ರಚನೆಗೆ ಸಂಬಂಧಿಸಿದಂತೆ ತಮ್ಮ ಕರ್ತವ್ಯಗಳನ್ನು ನಿರ್ವಹಿಸುವುದರಲ್ಲಿ ಹೆಚ್ಚು ಆಸಕ್ತಿ ತೋರದಿರಬಹುದು. ತಮಗೆ ಯಾವ ಬಗೆಯ ಅಧಿನಿಯಮಗಳು ಬೇಕು ಎಂಬುವುದನ್ನು ಗ್ರಹಿಸಲು ಸಾಮಾನ್ಯ ಜನರಲ್ಲಿ ವಿವೇಕವಿರುವುದಿಲ್ಲ. ಅನೇಕ ವೇಳೆ ಅವರು ಭಾವೋದ್ರೇಕದಿಂದ ವರ್ತಿಸುತ್ತಾರೆ. ಅಧಿನಿಯಮಗಳ ರಚನೆಗೆ ಸೂಕ್ತವಾದ ತರಬೇತು ಮತ್ತು ಅನುಭವ ಇರಬೇಕು. ಇವು ಸಾಮಾನ್ಯ ಜನರಲ್ಲಿ ಇರುವುದೆಂದು ನಿರೀಕ್ಷಿಸಲಾಗದು. ವಿಧಾನ ಮಂಡಲದಿಂದ ಅಂಗೀಕೃತವಾದ ಕಾನೂನುಗಳನ್ನು ಪ್ರಜೆಗಳ ಅಭಿಪ್ರಾಯಕ್ಕೆ ಒಪ್ಪಿಸಿದಾಗ ಜನರಿಗೆ ಆ ಕಾನೂನುಗಳ ಗುಣಾವಗುಣಗಳನ್ನು ಪರೀಕ್ಷಿಸುವ ಸಾಮಥ್ರ್ಯ ಇರುವುದಿಲ್ಲ ಎಂದು ವಾದಿಸಲಾಗಿದೆ.												   (ಎನ್.ಎಸ್.ಎಚ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ